ಅಮಾನತು ಶಿಕ್ಷೆಯಿಂದ ಕೊಹ್ಲಿ ಪಾರು
- Ananthamurthy m Hegde
- Dec 27, 2024
- 1 min read

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯದಲ್ಲೂ ಆಟಗಾರರ ನಡುವಿನ ಕದನ ಮುಂದುವರೆದಿದ್ದು, ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರಾಟ್ ಕೊಹ್ಲಿಗೆ ದಂಡ ಹೇರಲಾಗಿದೆ.
ಹೌದು, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರಿಗೆ ಭುಜದಿಂದ ಡಿಕ್ಕಿ ಹೊಡೆದ ಕಾರಣಕ್ಕೆ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ಹೇರಿದೆ.
ಐಸಿಸಿ ನಿಯಮ ಉಲ್ಲಂಘನೆ ಮಾಡಿರುವ ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದ್ದು, ಹಾಗೆಯೇ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಪಂದ್ಯದಲ್ಲಿ ಕೊಹ್ಲಿ ಅಮಾನತು ಶಿಕ್ಷೆಯಿಂದ ಪಾರಾಗಿದ್ದು, ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿದ್ದರಿಂದ ಕೊಹ್ಲಿ ಅಮಾನತು ಶಿಕ್ಷೆಯಿಂದ ಪಾರಾಗಿದ್ದಾರೆ. ನಾಲ್ಕು ಡಿಮೆರಿಟ್ ಪಾಯಿಂಟ್‌ಗೆ ಒಳಗಾದರೆ ಕನಿಷ್ಠ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಇನಿಂಗ್ಸ್‌ನ 10ನೇ ಓವರ್ ವೇಳೆ ಪಿಚ್‌ನಲ್ಲಿ ಎದುರುಬದುರಾಗಿ ನಡೆದು ಹೋಗುತ್ತಿದ್ದಾಗ ಕೊಹ್ಲಿ ಮತ್ತು ಕೋನ್‌ಸ್ಟಾಸ್ ಅವರು ಭುಜಕ್ಕೆ ಭುಜ ತಾಗಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪಂದ್ಯದ ಓವರ್‌ಗಳ ಮಧ್ಯೆ ಏಕಾಏಕಿ ಕೊನ್‌ಸ್ಟಸ್ ಬಳಿ ತೆರಳಿದ್ದ ಕೊಹ್ಲಿ ಭುಜದಿಂದ ಡಿಕ್ಕಿ ಹೊಡೆದಿದ್ದರು. ಬಳಿಕ ಇಬ್ಬರ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು.
ಕೊಹ್ಲಿ ವರ್ತನೆಯನ್ನು ಮಾಜಿ ನಾಯಕರು ಸೇರಿದಂತೆ ಕ್ರಿಕೆಟ್ ತಜ್ಞರು ಟೀಕೆ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್‌ನ ಮಾಜಿ ಕಪ್ತಾನ ಮೈಕಲ್ ವಾನ್, ಕೊಹ್ಲಿ ಮೇಲೆ ಶಿಸ್ತು ಕ್ರಮಕ್ಕೆ ಬಯಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಐಸಿಸಿ ವಿರಾಟ್ ಕೊಹ್ಲಿಗೆ ದಂಡ ಹೇರಿದೆ.
Comments