top of page

ಎಲ್ಲೆಡೆ ಧರ್ಮದ ಗಾಳಿ ಬೀಸಬೇಕಿದೆ : ರಾಘವೇಶ್ವರ ಶ್ರೀ

  • Writer: Ananthamurthy m Hegde
    Ananthamurthy m Hegde
  • Nov 26, 2024
  • 1 min read

ಕುಮಟಾ: ಧರ್ಮ-ದೈವ ನಿಷ್ಟರಲ್ಲದವರ ಮೇಲೆ ಕಾಲಚಕ್ರ ಸದಾ ತಿರುಗಿದರೆ ಧರ್ಮ, ದೇವರು, ಗುರು ನಿಷ್ಠರ ತಲೆಯ ಮೇಲೆ ಸದಾ ಕರುಣಾಚಕ್ರ ತಿರುಗುತ್ತಿರುತ್ತದೆ. ನಮ್ಮ ಮೇಲೆ ಯಾವ್ಯಾವುದೋ ಗಾಳಿ ಬೀಸುತ್ತಿದೆ, ಎಲ್ಲೆಡೆ ಧರ್ಮದ ಗಾಳಿ ಬೀಸಬೇಕಿದೆ ಎಂದು ರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಹೊಳೆಗದ್ದೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವಾರದಲ್ಲಿ ಸೋಮವಾರ ನೂತನ ನಿರ್ಮಿತ ಸಭಾಭವನ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ತಲೆಯ ಮೇಲೆ ತಾಯಿಯ ಕರುಣಾ ಚಕ್ರ ಇರಬೇಕೇ ಹೊರತು ಯಮನ ಕಾಲಚಕ್ರ ಇರಬಾರದು. ಸತ್ಯನಿಷ್ಠೆಗಳು ಬದುಕಿಗೆ ಮಾರ್ಗದರ್ಶಿಯಾಗುತ್ತವೆ. ದೂರದ ಮಂದಿರದಲ್ಲಿ ದೇವಿ ಅಮ್ಮನವರನ್ನು ಪೂಜಿಸಿ, ಮನೆಯಲ್ಲಿರುವ ಅಮ್ಮನಿಗೆ ಕಣ್ಣೀರು ಹಾಕಿಸುವುದು ಸರಿಯಲ್ಲ. ಸುಹಾಸಿನಿಯರು ಸಂತೋಷದಿಂದಿದ್ದರೆ ಮನೆ ಉದ್ಧಾರವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಮಹಿಳೆಯರಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು. ಗೃಹಿಣಿಯರಿಗೂ ತಾವು ಪೂಜ್ಯರೆಂಬುದು ಮನಸಿಗೆ ಬರಬೇಕು. ಪತಿತರೆಂದು ಭಾವಿಸಿದರೆ ಮಹಾಪಾಪವಾಗುತ್ತದೆ. ಪೂಜ್ಯತ್ವ ಅವರಲ್ಲಿ ಆವಾಹನೆಯಾಗಬೇಕು ಎಂದರು.

ಸಭಾಭವನಗಳಿಗೆ ಅತ್ಯಂತ ಮಹತ್ವವಿದೆ. ಸಭಾಭವನವೆಂದರೆ ಬಹಳಷ್ಟು ಜನರಿಗೆ ಜಾಗ ನೀಡುವಂತದ್ದಾಗಿದೆ. ಹಾಗೆಯೇ ನಮ್ಮ ಹೃದಯವೂ ಕೂಡಾ. ಅದರೆ ನಮ್ಮ ಹೃದಯದ ಸಭಾಭವನ ಎಷ್ಟೊಂದು ಚಿಕ್ಕದಾಗಿದೆ ಎಂದರೆ ಇನ್ನೊಬ್ಬರಿಗೆ ಜಾಗವಿಲ್ಲದಂತಾಗಿದೆ. ಹೆಚ್ಚೆಂದರೆ ನನ್ನ ಹೆಂಡತಿ-ಮಕ್ಕಳು ಮಾತ್ರ ಎಂಬಷ್ಟು ಚಿಕ್ಕದಾಗಿದೆ. ಹೀಗಾಗಬಾರದು, ಸಭಾಭವನಗಳೂ ಹಾಗೆಯೇ ನಮ್ಮ ಹೃದಯದ ದ್ಯೋತಕವಾಗಿ ಸರ್ವರಿಗೂ ಸದುಪಯೋಗವಾಗುವಂಥದ್ದು. ತಾಯಿ ಶಾಂತಿಕಾ ಪರಮೇಶ್ವರಿ ಅಮ್ಮನವರ ಕರುಣೆ ಎಲ್ಲರ ಮೇಲಿರಲೆಂದು ಹರಸಿದರು.

ದೇವಸ್ಥಾನ ಸಮಿತಿಯಿಂದ ಗುರುಭಿಕ್ಷಾ ಸೇವೆ ಜರುಗಿತು. ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಸ್ವೀಕರಿಸಿದರು. ಸಭಾಭವನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವ ಸೇವಾ ಸಮಿತಿ, ಕುಳಾವಿ ಭಜಕರು, ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Hozzászólások


Top Stories

bottom of page