top of page

ಛತ್ತೀಸಘಡದಲ್ಲಿ 12 ನಕ್ಸಲರ ಹತ್ಯೆ

  • Writer: Ananthamurthy m Hegde
    Ananthamurthy m Hegde
  • Jan 21
  • 1 min read

ಭುವನೇಶ್ವರ: ಗರಿಯಾಬಂದ್ ಜಿಲ್ಲೆಯ ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ಸಿಆರ್‌ಪಿಎಫ್‌ನೊಂದಿಗೆ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತರಾಗಿದ್ದಾರೆ.

ಇದಕ್ಕೂ ಮುನ್ನ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ಸೋಮವಾರ ಮುಂಜಾನೆ ನಿಷೇಧಿತ ಸಿಪಿಐ (ಮಾವೋವಾದಿ)ನ ಇಬ್ಬರು ಮಹಿಳಾ ನಕ್ಸಲರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದರು.

ಈ ಮೂಲಕ ನಡೆಯುತ್ತಿರುವ ಅಂತರರಾಜ್ಯ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹತರಾದ ಮಾವೋವಾದಿಗಳ ಸಂಖ್ಯೆ 14ಕ್ಕೆ ಏರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ತಡರಾತ್ರಿ ಮತ್ತು ಮುಂಜಾನೆ 12 ನಕ್ಸಲರು ಹತರಾಗಿದ್ದಾರೆ' ಎಂದು ಒಡಿಶಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಜಿಪಿ ವೈಬಿ ಖುರಾನಿಯಾ ಪ್ರಕಾರ, ಸೆಲ್ಫ್ ಲೋಡಿಂಗ್ ರೈಫಲ್ ಮತ್ತು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಸೇರಿದಂತೆ ಅಫಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹತ್ಯೆಗೀಡಾದ 12 ಮಾವೋವಾದಿಗಳು ಕಾನೂನುಬಾಹಿರ ಸಿಪಿಐ (ಮಾವೋವಾದಿ) ನ ಮೈನ್‌ಪುರ್-ನುವಾಪಾದ ವಿಭಾಗದ ಸದಸ್ಯರು ಎಂದು ವರದಿಯಾಗಿದೆ.

ನುವಾಪಾದದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕುಳರಿಘಾಟ್ ಮೀಸಲು ಅರಣ್ಯ ಪ್ರದೇಶದಲ್ಲಿ ಹಲವಾರು ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ನಂತರ ಭಾನುವಾರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಮೂಲಗಳು ಸೂಚಿಸಿವೆ.

ಜಂಟಿ ಕಾರ್ಯಾಚರಣೆಯಲ್ಲಿ ಒಡಿಶಾ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು, ಛತ್ತೀಸ್‌ಗಢ ಪೊಲೀಸ್‌ನ ಇ-30 ಫೋರ್ಸ್ ಮತ್ತು ಸಿಆರ್‌ಪಿಎಫ್ ಭಾಗವಹಿಸಿದ್ದವು.

Comments


Top Stories

bottom of page