ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಯಶಸ್ವಿಗೆ ಅನ್ಯಾಯ ?
- Ananthamurthy m Hegde
- Dec 30, 2024
- 1 min read

ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. ಭಾರತವನ್ನು ಸೋಲಿನಿಂದ ಪಾರು ಮಾಡಲು ಕೆಚ್ಚೆದೆಯ ಪ್ರದರ್ಶನ ನೀಡುತ್ತಿದ್ದ ಯಶಸ್ವಿ ಜೈಸ್ವಾಲ್, ಥರ್ಡ್ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಮ್ಮೆ ಅನ್ಯಾಯವಾಯಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 340 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. 33 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಈ ವೇಳೆ ನಾಲ್ಕನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ಸಮಯೋಚಿತ ಜತೆಯಾಟವಾಡುವ ಮೂಲಕ ಆಸರೆಯಾದರು. ಆದರೆ ಪಂತ್ 30 ರನ್‌ಗೆ ವಿಕೆಟ್ ಒಪ್ಪಿಸಿದಾಗ ಮತ್ತೆ ಭಾರತ ನಾಟಕೀಯ ಕುಸಿತ ಕಂಡಿತು.
ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಕೆಚ್ಚೆದೆಯ ಹೋರಾಟ ತೋರಿದ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೆಲ್ಬರ್ನ್ ಟೆಸ್ಟ್‌ನಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿದರು. 208 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 84 ರನ್ ಗಳಿಸಿ ಶತಕದತ್ತ ಜೈಸ್ವಾಲ್ ಮುನ್ನುಗ್ಗುತ್ತಿದ್ದರು. ಆದರೆ ಕಮಿನ್ಸ್ ಬೌಲಿಂಗ್‌ನಲ್ಲಿ ಜೈಸ್ವಾಲ್ ಪುಲ್ ಮಾಡುವ ಯತ್ನದಲ್ಲಿ ಚೆಂಡು ಬ್ಯಾಟ್ ವಂಚಿಸಿ ಕೀಪರ್ ಕೈ ಸೇರಿತು. ಆಸ್ಟ್ರೇಲಿಯಾ ಔಟ್‌ಗಾಗಿ ಬಲವಾದ ಮನವಿ ಸಲ್ಲಿಸಿದರು. ಆದರೆ ಆನ್‌ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ಆಗ ಆಸ್ಟ್ರೇಲಿಯಾ ನಾಯಕ ಡಿಆರ್‌ಎಸ್ ಮೊರೆ ಹೋದರು.
ಡಿಆರ್‌ಎಸ್‌ನಲ್ಲಿ ಚೆಂಡು ಬ್ಯಾಟ್‌ಗೆ ಸವರಿರುವ ಬಗ್ಗೆ ಯಾವುದೇ ಅಧಿಕೃತ ಸಾಕ್ಷಿಗಳು ಸಿಗಲಿಲ್ಲ. ಹೀಗಿದ್ದೂ ಚೆಂಡು ದಿಕ್ಕು ಬದಲಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಥರ್ಡ್ ಅಂಪೈರ್ ಔಟ್ ನೀಡಿದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಟೀಂ ಇಂಡಿಯಾಗೆ ಅಂಪೈರ್‌ಗಳು ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಅಂಪೈರ್‌ಗಳು ಭಾರತಕ್ಕೆ ಅನ್ಯಾಯದ ತೀರ್ಪು ನೀಡುತ್ತಿರುವುದು ಇದೇ ಮೊದಲೇನಲ್ಲ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪರ್ತ್ ಟೆಸ್ಟ್‌ನಲ್ಲೂ ಕೆ ಎಲ್ ರಾಹುಲ್ ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಚೆಂಡು ರಾಹುಲ್ ಬ್ಯಾಟ್‌ಗೆ ತಗುಲದಿದ್ದರೂ ಥರ್ಡ್ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು
Comments