top of page

ಬಹಿರಂಗ ಸಭೆಯಲ್ಲಿ ಉಗ್ರ ಮಸೂದ್ ಭಾಷಣ: ಪಾಕ್ ದ್ವಂದ್ವ ನಿಲುವು ಬಹಿರಂಗ; ಕ್ರಮಕ್ಕೆ ಭಾರತ ಆಗ್ರಹ

  • Writer: Ananthamurthy m Hegde
    Ananthamurthy m Hegde
  • Dec 7, 2024
  • 1 min read


ನವದಹಲಿ: 2001ರ ಸಂಸತ್ ದಾಳಿ ಸೇರಿದಂತೆ ಹಲವು ದಾಳಿಗಳನ್ನು ರೂಪಿಸಿದ ಆರೋಪ ಹೊತ್ತಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

2 ದಶಕದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ 2 ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿರುವ ಮಸೂದ್ ಅಜರ್, ಭಾಷಣ ಮಾಡಿದ್ದಾನೆ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.

ಭಾಷಣ ವೇಳೆ ಭಾರತ ಮತ್ತು ಇಸ್ರೇಲ್ ನ್ನು ಗುರಿಯಾಗಿಸಿಕೊಂಡು ಜಿಹಾದಿ ಕಾರ್ಯಾಚರಣೆ ನವೀಕರಿಸುವುದಾಗಿ ಆತ ಪ್ರತಿಜ್ಞೆ ಮಾಡಿದ್ದಾನೆ. ಇದಕ್ಕೆ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ತೀವ್ರವಾಗಿ ಕಿಡಿಕಾರಿದ್ದಾರೆ.

ಪಾಕಿಸ್ತಾನದಲ್ಲಿ ಮಸೂದ್ ಅಜರ್ ಇರುವುದನ್ನು ಪಾಕಿಸ್ತಾನ ನಿರಾಕರಿಸುತ್ತಿದೆ. ಆದರೆ, ಅಜರ್ ಭಾಷಣದ ವರದಿಗಳನ್ನು ನಂಬಿದರೆ, ಅದು ಪಾಕಿಸ್ತಾನದ ದ್ವಂದ್ವ ನಿಲುವನ್ನು ಬಹಿರಂಗಪಡಿಸುತ್ತಿದೆ. ಈ ಬಗ್ಗೆ ಕ್ರಮ ಅಗತ್ಯ ಎಂದು ಹೇಳಿದ್ದಾರೆ.

ಭಾರತದ ಮೇಲೆ ಅನೇಕ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿರುವ ಅಜರ್ ವಿರುದ್ಧ ಪಾಕಿಸ್ತಾನವು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಆತನ (ಅಜರ್) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಆತನನ್ನು ನ್ಯಾಯಾಂಗಕ್ಕೆ ತರಬೇಕು ಎಂದು ನಾವು ಒತ್ತಾಯಿಸುತ್ತೇವೆ ತಿಳಿಸಿದ್ದಾರೆ.

2001 ರ ಭಾರತೀಯ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈ ದಾಳಿ, 2016 ರ ಪಠಾಣ್‌ ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಗಳಿಗೆ ಕಾರಣವಾದ ಮಸೂದ್ ಅಜರ್ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ.

ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಅಜರ್ ಕಾಶ್ಮೀರ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಇದಲ್ಲದೆ, ಬ್ರಿಟನ್ ನಲ್ಲೂ ಜಿಹಾದಿಯನ್ನು ಪರಿಚಯಿಸಿದ್ದ ಉಗ್ರನಾಗಿದ್ದಾನೆ. ಭಾರತ ಈತನನ್ನು ಬಂಧಿಸಿದ ಬೆನ್ನಲ್ಲೇ ವಿಮಾನವನ್ನು ಹೈಜಾಕ್ ಮಾಡಿದ್ದ, ಈತ ಜೈಲಿನಲ್ಲಿದ್ದಾಗ ಅಮೆರಿಕದ ತನಿಖಾ ಸಂಸ್ಥೆಗಳು, ಇಂಟರ್‌ಪೋಲ್ ಕೂಡ ವಿಚಾರಣೆ ನಡೆಸಿದ್ದವು. ಮೇ 1, 2019 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈತನನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತ್ತು.

Comments


Top Stories

bottom of page