ಮಹಿಳೆಯರ ಉದ್ಯೋಗಕ್ಕೆ ತಾಲಿಬಾನ್ ಕಡಿವಾಣ
- Ananthamurthy m Hegde
- Dec 31, 2024
- 1 min read

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಮಹಿಳಾ ವಿರೋಧಿ ನಿಲುವನ್ನು ಮುಂದುವರೆಸಿದೆ. ಮಹಿಳೆಯರಿಗೆ ಎನ್‌ಜಿಓಗಳು ಉದ್ಯೋಗ ನೀಡಕೂಡದು. ಒಂದು ವೇಳೆ ಉದ್ಯೋಗ ನೀಡಿದರೆ ಅಂತಹ ಸಂಸ್ಥೆಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಿದೆ. ದೇಶದಲ್ಲಿ ಮಹಿಳೆಯರು ಇಸ್ಲಾಮಿಕ್ ಶಿರವಸ್ತ್ರವನ್ನು ಸರಿಯಾಗಿ ಧರಿಸದ ಕಾರಣ, ಉದ್ಯೋಗದಿಂದ ಅಮಾನತು ಮಾಡಬೇಕೆಂದು ತಾಲಿಬಾನ್ ಸರ್ಕಾರ 2 ವರ್ಷಗಳ ಹಿಂದೆಯೇ ಆದೇಶಿಸಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಎಚ್ಚರಿಕೆ ನೀಡಿದ್ದು, ಮಹಿಳೆಯರಿಗೆ ಎನ್‌ಜಿಓಗಳು ಉದ್ಯೋಗ ನೀಡಬಾರದು. ಒಂದು ವೇಳೆ ನೀಡಿದರೆ ಅಂಥ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಿದೆ. ತಾಲಿಬಾನಿಗಳು ಈಗಾಗಲೇ ಅಪ್ಘಾನಿಸ್ತಾನದಲ್ಲಿ ಅನೇಕ ಉದ್ಯೋಗಗಳು ಮತ್ತು ಹೆಚ್ಚಿನ ಸಾರ್ವಜನಿಕ ಸ್ಥಳಗಳಿಗೆ ಮಹಿಳೆಯರಿಗೆ ನಿರ್ಬಂಧ ವಿಧಿಸಿದ್ದಾರೆ. ಅಲ್ಲದೇ 6ನೇ ತರಗತಿ ನಂತರ ಶಿಕ್ಷಣದಿಂದಲೂ ಹೊರಗಿಟ್ಟಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಅಧಿಕಾರ ಕೈಗೆತ್ತಿಕೊಂಡಾಗಿನಿಂದ ಮಹಿಳೆಯರ ಸ್ವಾತಂತ್ರ್ಯದ ಮೇಲೆ ಪ್ರಹಾರ ನಡೆಸುತ್ತಿರುವ ತಾಲಿಬಾನಿಗಳು ಇದೀಗ ಮಹಿಳೆಯರು ಹೆಚ್ಚು ಕಾಣಿಸಿಕೊಳ್ಳುವಂತಹ ಸ್ಥಳಗಳತ್ತ ಮುಖ ಮಾಡುವಂತ ಮನೆಗಳ/ಕಟ್ಟಡಗಳ ಕಿಟಕಿಗಳನ್ನು ನಿರ್ಮಿಸದಂತೆ ಆದೇಶ ಹೊರಡಿಸಿದ್ದಾರೆ.
ಜತೆಗೆ, ಈಗಾಗಲೇ ಇರುವ ಅಂತಹ ಕಿಟಕಿಗಳನ್ನು ಮುಚ್ಚಲೂ ನಿರ್ದೇಶಿಸಿದ್ದಾರೆ. ತಾಲಿಬಾನ್ ಸರ್ಕಾರದ ವಕ್ತಾರ ಈ ಹೇಳಿಕೆ ನೀಡಿದ್ದು, ಮಹಿಳೆಯರು ಕೆಲಸ ಮಾಡುತ್ತಿರುವುದನ್ನು ಪುರುಷರು ನೋಡುವುದರಿಂದ ತೊಂದರೆಗಳಾಗುತ್ತವೆ. ಹೆಂಗಳೆಯರು ಹೆಚ್ಚಾಗಿ ಇರುವ ಅಂಗಳ, ಅಡುಗೆ ಕೋಣೆ, ಬಾವಿಯಂತಹ ಸ್ಥಳಗಳು ಕಾಣುವಂತೆ ಹೊಸ ಕಟ್ಟಡಗಳಲ್ಲಿ ಕಿಟಕಿಗಳನ್ನು ನಿರ್ಮಾಣ ಮಾಡಬಾರದು. ನಗರಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು ಎಂದು ಆದೇಶಿಸಿದ್ದಾನೆ.
ಅಂತೆಯೇ, ಈಗಾಗಲೇ ಇರುವ ಮನೆಗಳಿಗೆ ಅಡ್ಡ ಗೋಡೆ ಕಟ್ಟಬೇಕು ಅಥವಾ ಅಂಥ ಕಿಟಕಿಗಳನ್ನು ಶಾಶ್ವತವಾಗಿ ಮುಚ್ಚಬೇಕು ಎಂದೂ ಹೇಳಲಾಗಿದೆ.
Comments