top of page

ಸಂಚಲನ ಮೂಡಿಸಿದ ಡಿ. ಕೆ ಶಿವಕುಮಾರ್‌ ಹೇಳಿಕೆ

  • Writer: Ananthamurthy m Hegde
    Ananthamurthy m Hegde
  • Mar 17
  • 1 min read

ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ ಎಂದು ಡಿಕೆ ಶಿವಕುಮಾರ್‌ ನೀಡಿರುವ ಹೇಳಿಕೆ ಕಾಂಗ್ರೆಸ್‌ನಲ್ಲಿಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಡಿಕೆಶಿ ಸಭೆ ನಡೆಸಿ ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ಈ ಸಭೆಯಲ್ಲಿ ಡಿಕೆಶಿ ಯಾರೂ ಬೇಕಾದರೂ ಕೆಪಿಸಿಸಿ ಜವಾಬ್ದಾರಿ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಪವರ್ ಶೇರ್ ಗೇಮ್ ಗೆ ಚಾಲನೆ ನೀಡಿದ್ದಾರೆ.

ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಯೊಬ್ಬರು ಜಿಲ್ಲಾ ಮಟ್ಟದಲ್ಲಿ ಎರಡು ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಅಲ್ಲಿಯೇ ಇದ್ದ ಡಿಕೆಶಿ ತಕ್ಷಣವೇ, ನೋಡ್ರಪ್ಪ, ಸಮಯ, ಸಂದರ್ಭ ನೋಡಿಕೊಂಡು ನಮ್ ಪಾರ್ಟಿಯಲ್ಲಿ ಹಂಗೆ ಆಗುತ್ತೆ. ಖರ್ಗೆ ಸಾಹೇಬ್ರು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ, ಎರಡು ಖಾತೆ ಕೂಡ ನಿರ್ವಹಿಸ್ತಿದ್ದೇನೆ ಎಂದು ತಿಳಿಸಿದರು. ಮುಂದುವರಿದು, 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಬಳಿಕ ನಾನು ಮುಕ್ತನಾಗುತ್ತೇನೆ. ಬೇರೆಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್‌ ನಿಯಮದ ಪ್ರಕಾರ ಒಬ್ಬರಿಗೆ ಒಂದು ಹುದ್ದೆ ಮಾತ್ರ ಸಿಗಬೇಕು. ಸದ್ಯ ಡಿಕೆಶಿ ಡಿಸಿಎಂ ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಈ ಹಿಂದೆಯೇ ಪಕ್ಷದ ಒಳಗಡೆಯೇ ಅಧ್ಯಕ್ಷ ಸ್ಥಾನ ಮತ್ತು ಡಿಸಿಎಂ ಎರಡನ್ನೂ ನಿಭಾಯಿಸುತ್ತಿರುವುದಕ್ಕೆ ಅಪಸ್ವರ ಎದ್ದಿತ್ತು. ಈಗ ಡಿಕೆಶಿ ಅವರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ ಎಂದು ಹೇಳುವ ಮೂಲಕ ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ.

Comentários


Top Stories

bottom of page